ಚೌಥಾಯಿ
ಒಟ್ಟು ಉತ್ಪನ್ನದ ನಾಲ್ಕನೆಯ ಒಂದು ಭಾಗವಾಗಿ ಕೊಡಬೇಕಾಗಿದ್ದ ಕಂದಾಯ, ಪ್ರಥಮತಃ ಶಿವಾಜಿ ಇದನ್ನು ಜಾರಿಗೆ ತಂದ. ಶಿವಾಜಿಯ ಆಡಳಿತಕ್ಕೊಳಪಟ್ಟಿದ್ದ ಭಾಗ ವಿಶೇಷವಾಗಿ ಗುಡ್ಡಗಾಡಿನಿಂದ ಕೂಡಿದ್ದರಿಂದ ಅಲ್ಲಿ ಹೆಚ್ಚು ವರಮಾನ ಗಳಿಸುವುದು ಅವನಿಗೆ ಸಾಧ್ಯವಿರಲಿಲ್ಲ. ಆದ್ದರಿಂದ ರಾಜ್ಯ ವಿಸ್ತರಣೆಗೆ ಅಗತ್ಯವಾದ ಹಣಕ್ಕಾಗಿ ಶಿವಾಜಿ ಈ ಉಪಾಯವನ್ನು ಕೈಗೊಂಡು ತನ್ನ ಅಧೀನಕ್ಕೆ ಒಳಪಡದಿದ್ದ ರಾಜ್ಯಗಳ ಮೇಲೆ ಇದನ್ನು ವಿಧಿಸುತ್ತಿದ್ದ. ಮುಸಲ್ಮಾನ ರಾಜರಿಂದ ಹಣ ವಸೂಲು ಮಾಡಲೂ ಈ ವಿಧಾನವನ್ನನುಸರಿಸುತ್ತಿದ್ದ. ಸ್ವ-ಇಚ್ಛೆಯಿಂದ ಚೌಥಾಯಿ ಕೊಡಲೊಪ್ಪಿದರೆ ಮರಾಠರು ಅವರಿಗೆ ಯಾವ ವಿಧವಾದ ತೊಂದರೆಯನ್ನೂ ಕೊಡುತ್ತಿರಲಿಲ್ಲ. ಆದಿಲ್‍ಷಾಹಿಯಿಂದ ಮೂರು ಲಕ್ಷ, ಕುತುಬ್‍ಷಾಯಿಯಿಂದ ಐದು ಲಕ್ಷ ಹೊನ್ನನ್ನು ಪ್ರತಿವರ್ಷ ಶಿವಾಜಿ ಈ ರೀತಿ ಪಡೆಯತೊಡಗಿದ (1668). ಅಲ್ಲದೆ ದಿಲ್ಲಿಯ ಮೊಗಲರಿಂದಲೂ 1671ರಿಂದ ಚೌಥಾಯಿ ವಸೂಲಿ ಹಕ್ಕನ್ನು ಪಡೆದ. ಅನಂತರ ಗೋವದ ಪೋರ್ಚುಗೀಸರು, ಬೆದನೂರಕರ-ಸೊಂಧೇಕರರು, ಕರ್ನಾಟಕದ ಪಾಳೆಯಗಾರರು ಮುಂತಾದವರಿಂದಲೂ ಅವನು ಚೌಥಾಯಿ ವಸೂಲು ಮಾಡತೊಡಗಿದ. ಚೌಥಾಯಿ ಕೊಟ್ಟ ಸಂಸ್ಥಾನದ ರಕ್ಷಣೆಯ ಹೊಣೆ ಶಿವಾಜಿಯ ಸೈನ್ಯದ್ದಾಗಿತ್ತು. ಅವನ ಅನಂತರವೂ ಚೌಥಾಯಿ ಒಂದು ಕಾಯಂ ಹಕ್ಕಾಗಿ ಪರಿಣಮಿಸಿತು. ದಿಲ್ಲಿಯ ಬಾದಷಹರ ಪರವಾನಿಗೆಯ ಆಧಾರದ ಮೇಲೆ ಭಾರತದ ಬೇರೆಬೇರೆ ಸಂಸ್ಥಾನಿಕರಿಂದ ಸಾಮೋಪಚಾರ ಇಲ್ಲವೆ ಒತ್ತಾಯದಿಂದ ಮರಾಠರು ಚೌಥಾಯಿ ವಸೂಲು ಮಾಡುತ್ತಿದ್ದರು. 1719ರಲ್ಲಿ ಕೊಟ್ಟ ಸನದಿನಲ್ಲಿ ದಕ್ಷಿಣ ಭಾರತದ ಆರೂವರೆ ಸಭೆಗಳ ಚೌಥಾಯಿ ವಸೂಲು ಮಾಡುವ ಹಕ್ಕು ಇದ್ದುದರಿಂದ ಶಾಹೂ ಸೈನ್ಯವನ್ನಿಟ್ಟುಕೊಂಡು ಆ ಸಭೆಗಳನ್ನು ಕಾಪಾಡಬೇಕಿತ್ತು. ದಕ್ಷಿಣ ಸುಭೆಗಳ ಒಟ್ಟು ಉತ್ಪನ್ನ ಹದಿನೆಂಟು ಕೋಟಿ ಇದ್ದುದರಿಂದ ಮರಾಠರಿಗೆ ಚೌಥಾಯಿಂದಲೇ ಸುಮಾರು ನಾಲ್ಕೂವರೆ ಕೋಟಿ ಹೊನ್ನು ಬರುತ್ತಿತ್ತು. ಹಣದ, ಸೈನ್ಯದ ಮತ್ತು ಒಗ್ಗಟ್ಟಿನ ಕೊರತೆಯಿಂದಾಗಿ ಕೊನೆಯವರೆಗೂ ಚೌಥಾಯಿ ವ್ಯವಸ್ಥೆಯನ್ನು ಕಾಪಾಡಿಕೊಂಡು ಬರಲು ಮರಾಠರಿಗೆ ಸಾಧ್ಯವಾಗಲಿಲ್ಲ.								(ಬಿ.ಎಂ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ